

ಕರ್ನಾಟಕ ಕಲಾಮಂದಿರ, ವಿಶ್ವ ಕನ್ನಡ ಸಮ್ಮೇಳನದ ಅತಿಥಿಗೃಹ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣದ ಜೊತೆಗೇ ಪ್ರದರ್ಶನವನ್ನು ಆಯೋಜಿಸಲು 1981 ರಲ್ಲಿ ಕರ್ನಾಟಕ ಪ್ರದರ್ಶನ ಪ್ರಾಧಿಕಾರವನ್ನು ಸ್ಥಾಪಿಸಲಾಯಿತು. ಈ ಮೇಲೆ ತಿಳಿಸಿದ ಕಟ್ಟಡಗಳು 1985 ರಲ್ಲಿ ಪೂರ್ಣಗೊಂಡಿವೆ ಮತ್ತು ಸರಕಾರ ಆದೇಶದ ಅನುಸಾರ 1989 ರ ಏಪ್ರಿಲ್ 1 ರಂದು ಕ್ರಮವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪಿ.ಡಬ್ಲೂ.ಡಿ. ಇಲಾಖೆಗಳಿಗೆ ಹಸ್ತಾಂತರಿಸಲ್ಪಟ್ಟಿವೆ. ದಸರಾ ಪ್ರದರ್ಶನವನ್ನು ನಡೆಸುವ ಕಾರ್ಯವನ್ನು ಕರ್ನಾಟಕ ಪ್ರದರ್ಶನ ಪ್ರಾಧಿಕಾರಕ್ಕೆ 1987 ರಲ್ಲಿ ವಹಿಸಲಾಯಿತು.
ದಸರಾ ಪ್ರದರ್ಶನವನ್ನು 1987 ರಿಂದ 1993 ರವರೆಗೆ ಮಾಹಿತಿ, ಪ್ರವಾಸೋದ್ಯಮ ಮತ್ತು ಯುವಜನ ಇಲಾಖೆಗಳ ಬ್ಯಾನರ್ ನ ಅಡಿಯಲ್ಲಿ ನಡೆಸಲಾಯಿತು ಮತ್ತು 1994 ರಿಂದ 2003 ರವರೆಗೆ ಈ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಾಹಿತಿ ಮತ್ತು ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ ನಡೆಸಲಾಯಿತು. ಪ್ರದರ್ಶನವನ್ನು ನಡೆಸುವ ಸಲುವಾಗಿ ರಾಜ್ಯ ಸರ್ಕಾರವು 80 ಎಕರೆ ಭೂಮಿಯನ್ನು 1996 ರಿಂದ ಅನ್ವಯವಾಗುವಂತೆ 30 ವರ್ಷಗಳವರೆಗೆ ಪ್ರಾಧಿಕಾರಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಿತು. ಅದರಂತೆ, ಪ್ರದರ್ಶನದಲ್ಲಿ, ವಿಶೇಷವಾಗಿ ದಸರಾ ಸಮಯದಲ್ಲಿ 90 ದಿನಗಳವರೆಗೆ ಮತ್ತು ಬೇಸಿಗೆ ಸಮಯದಲ್ಲಿ 45 ದಿನಗಳವರೆಗೆ ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಉಳಿದ ಅವಧಿಗಳನ್ನು ಹೊರತುಪಡಿಸಿ, ಈ ವೇಳೆಯಲ್ಲಿ ಇತರ ಇಲಾಖೆಗಳ ಸಹಯೋಗದೊಂದಿಗೆ ಖಾದಿ ಮೇಳ, ಕರಕುಶಲ ವಸ್ತುಪ್ರದರ್ಶನ, ಚರ್ಮೋದ್ಯಮದ ವಸ್ತುಗಳ ಎಕ್ಸ್‍ಪೋ, ಆಹಾರ ಉತ್ಸವ, ಗ್ರಾಹಕರ ಉತ್ಸವ ಮತ್ತು ಸರ್ಕಾರದ ಬೆಳವಣಿಗೆಗಳನ್ನು ಪ್ರತಿಬಿಂಬಿಸುವ ಇತರೆ ಜನ-ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇತರೆ ಖಾಸಗಿಯವರು ನಡೆಸುವ ಕಾರ್ಯಕ್ರಮಗಳಿಗೂ ಅನುವು ಮಾಡಿಕೊಡಲು ಈ ಸೌಲಭ್ಯವನ್ನು ಬಾಡಿಗೆಗೂ ಕೊಡಲಾಗುತ್ತದೆ.