

ಮುಖ್ಯದ್ವಾರ
ಮೈಸೂರು ಅರಮನೆಯ ಪೂರ್ವದ್ವಾರದಲ್ಲಿ ಪ್ರವೇಶದ್ವಾರವನ್ನು ಕಟ್ಟಲಾಗಿದೆ. ಇದರ ಎತ್ತರ 50 ಅಡಿ ಮತ್ತು ಅಗಲ 165 ಅಡಿಗಳಷ್ಟಿದೆ. ಅರಮನೆಯು ಪ್ರಕಾಶಗೊಳ್ಳುವ ಸಮಯದಲ್ಲಿ ಈ ದ್ವಾರಗಳೂ 9000 ಬಲ್ಬುಗಳಿಂದ ಪ್ರಕಾಶಗೊಳ್ಳುತ್ತವೆ.

ವ್ಯಾಪಾರ ಮಳಿಗೆಗಳು
ಪ್ರದರ್ಶನದ ‘ಎ’ ಬ್ಲಾಕ್ ನಲ್ಲಿ 10 ಅಡಿ ಅಗಲ ಮತ್ತು 12 ಅಡಿ ಉದ್ದದ ಒಟ್ಟು 125 ಮಳಿಗೆಗಳು ಲಭ್ಯವಿವೆ ಮತ್ತು ‘ಬಿ’ ಬ್ಲಾಕ್ ನಲ್ಲಿ ಇಂತಹುದೇ 20 ಮಳಿಗೆಗಳು ಮತ್ತು ‘ಸಿ’ ಬ್ಲಾಕ್ ನಲ್ಲಿ 46 ಮಳಿಗೆಗಳು ಲಭ್ಯವಿವೆ. ಸಂದರ್ಶಕರ ಚಲನೆಯನ್ನು ಸುಲಭವಾಗಿಸಲು ಮೂರು ಅಡಿ ಅಗಲದ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ.

ಕನ್ನಡ ಕಾರಂಜಿ ಕಟ್ಟಡ
1985 ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ನೆನಪಿನಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಪ್ರದರ್ಶನಕ್ಕೆ ಸೂಕ್ತವಾದ ನೆಲ ಮತ್ತು ಮೊದಲ ಮಹಡಿಯ ಒಟ್ಟು 26 ಮಳಿಗೆಗಳನ್ನು ಇದು ಹೊಂದಿದೆ. ಇದರ ಕಾರ್ಪೆಟ್ ಉದ್ದ 31,000 ಚದರ ಅಡಿಗಳು.

ವಿದ್ಯುತ್ ಸೌಲಭ್ಯ
ಕಟ್ಟಡಗಳು, ಕೊಳವೆಬಾವಿಗಳು ಮತ್ತು ಬೀದಿ ದೀಪಗಳನ್ನು ಬೆಳಗಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ದಿಂದ 124 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಅನ್ನು ಎಳೆಯಲಾಗಿದೆ. ಪ್ರದರ್ಶನದ ಸಮಯದಲ್ಲಿ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು 625 ಕವಿ ಸಾಮರ್ಥ್ಯದ ಎರಡು ಜನರೇಟರ್‌ಗಳು ಮತ್ತು 63 ಕೆವಿ ಸಾಮರ್ಥ್ಯದ ಒಂದು ಜನರೇಟರ್ ಅನ್ನು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಒವರ್‌ಹೆಡ್ ಕೇಬಲ್‌ಗಳನ್ನು ಅಂಡರ್‌ಗ್ರೌಂಡ್ ಕೇಬಲ್‌ಗಳಿಂದ ಬದಲಾಯಿಸಲಾಗಿದೆ ಮತ್ತು ಅಗತ್ಯವಿರುವೆಡೆಯಲ್ಲಿ ಕಂಟ್ರೋಲ್ ಪ್ಯಾನೆಲ್‌ಗಳ ಮೂಲಕ ವಿದ್ಯುತ್ ವ್ಯವಸ್ಥೆಯನ್ನು ಖಚಿತಪಡಿಸಲಾಗಿದೆ.

ಕಾರಂಜಿಗಳು
ಸಂದರ್ಶಕರು ಮತ್ತು ಪ್ರವಾಸಿಗರಿಗೆ ಹಿತವಾದ ಅನುಭವ ನೀಡಲು ಪ್ರದರ್ಶನದ ಮುಖ್ಯದ್ವಾರದಲ್ಲಿ ಕಾರಂಜಿಗಳನ್ನು ನಿರ್ಮಿಸಲಾಗಿದೆ ಮತ್ತು ಪ್ರದರ್ಶನದೊಳಗಿನ ಪಾದಚಾರಿ ಮಾರ್ಗದಲ್ಲಿ 60 ಕ್ಕೂ ಹೆಚ್ಚು ನೀರಿನ ಸಿಂಪರಣಾ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳ ಉದ್ಯಾನದಲ್ಲಿ ‘ಅನಿರೀಕ್ಷಿತ ಕಾರಂಜಿ’ ಮತ್ತು ಪ್ರದರ್ಶನದ ಮಧ್ಯಭಾಗದಲ್ಲಿ ‘ಬಾಲ್ ಫೌಂಟೇನ್’ ನಿರ್ಮಾಣದ ಜೊತೆಗೆ ಮನರಂಜನಾ ಉದ್ಯಾನವನದ ಬಳಿ ‘ಬೃಂದಾವನ ಕಾರಂಜಿ’ಯ ಮಾದರಿಯಲ್ಲಿ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ.

ರಂಗಮಂದಿರ
ಪ್ರದರ್ಶನದ ಆವರಣದಲ್ಲಿ ಎರಡು ರಂಗಮಂದಿರಗಳನ್ನು (ಪ್ರದರ್ಶನ ವೇದಿಕೆ) ನಿರ್ಮಿಸಲಾಗಿದೆ. ಇವುಗಳಲ್ಲಿ, ಬಿ.ವಿ. ಕಾರಂತ ರಂಗಮಂದಿರವು ನಾಲ್ಕು ಗ್ರೀನ್ ರೂಮ್‌ಗಳನ್ನು ಹೊಂದಿದ್ದು, ಎರಡು ಸಾವಿರ ಆಸನ ವ್ಯವಸ್ಥೆಯನ್ನು ಹೊಂದಿದೆ. ಪಿ. ಕಾಳಿಂಗರಾವ್ ರಂಗಮಂದಿರವು ಎರಡು ಗ್ರೀನ್ ರೂಮ್‌ಗಳನ್ನು ಹೊಂದಿದೆ. ಇದು ತೆರೆದ ರಂಗಮಂದಿರವಾಗಿದ್ದು ಇಲ್ಲಿಯೂ ಕೂಡಾ ಎರಡು ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಡಿ. ದೇವರಾಜ ಅರಸು ಬಹು-ಉದ್ದೇಶದ ಕ್ರೀಡಾಂಗಣ
ದಸರಾ ವಸ್ತುಪ್ರದರ್ಶನದ ಅಂಗಳದ ಪಕ್ಕದಲ್ಲಿ ಈ ಕ್ರೀಡಾಂಗಣವನ್ನು 1997 ರಲ್ಲಿ 1.04 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು ಕ್ರೀಡಾಂಗಣದ ಮಾದರಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದರ ಗ್ಯಾಲರಿಯ ಸಾಮರ್ಥ್ಯವು ಒಂದು ಸಾವಿರ ಜನರಿಗೆ ಅವಕಾಶವನ್ನು ಕಲ್ಪಿಸುತ್ತದೆ.

ಹೂದೋಟ
ಮುಖ್ಯಪ್ರವೇಶದ್ವಾರದ ಎದುರಿಗೆ, ‘ಎ’ ಬ್ಲಾಕ್, ಚೆಂಡಿನ ಕಾರಂಜಿಯ ಸುತ್ತಲೂ, ಜಿಲ್ಲೆಯ ಪೆವಿಲಿಯನ್ ಮುಂದೆ, ಪವರ್ ಹೌಸ್ ಪಕ್ಕದಲ್ಲಿ ಹೂದೋಟಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೂದೋಟಗಳ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಆಧುನಿಕ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ.

ಕುಡಿಯುವ ನೀರು
ಒಟ್ಟು ಐದು ಕೊಳವೆಬಾವಿಗಳನ್ನು ತೆರೆಯಲಾಗಿದೆ ಮತ್ತು ಪ್ರದರ್ಶನದ ವೇಳೆಯಲ್ಲಿ ಪ್ರವಾಸಿಗರ ಬಾಯಾರಿಕೆಯನ್ನು ತಣಿಸಲು ಗುತ್ತಿಗೆದಾರರ ಮುಖಾಂತರ ಮಿನರಲ್ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ

ಮನರಂಜನೆ
ಪ್ರದರ್ಶನದಲ್ಲಿನ ದಕ್ಷಿಣ ಭಾಗದ ಒಟ್ಟು ಎರಡು ಎಕರೆ ಪ್ರದೇಶವನ್ನು ಮನರಂಜನೆಗಾಗಿಯೇ ಮೀಸಲಿಡಲಾಗಿದೆ. ಪ್ರತಿವರ್ಷವೂ ಇದೇ ಪ್ರದೇಶದಲ್ಲಿ ಅಮ್ಯೂಸ್‍ಮೆಂಟ್ ಪಾರ್ಕ್‍ಗಳು ಬರುತ್ತವೆ ಮತ್ತು ಗುತ್ತಿಗೆಯ ಆಧಾರದಲ್ಲಿ ಇಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಗೆ ಕೆಲಸಗಳನ್ನು ವಹಿಸಲಾಗುತ್ತದೆ. ಪ್ರತಿವರ್ಷ ಲಕ್ಷಾಂತರ ಜನರು ಇದರ ಸೌಲಭ್ಯವನ್ನು ಬಳಸುತ್ತಿದ್ದಾರೆ. ಇದರ ಇತರ ಆಕರ್ಷಣೆಗಳೆಂದರೆ- ಪ್ರದರ್ಶನದ ಕೇಂದ್ರಭಾಗದಲ್ಲಿ ಸ್ಥಾಪಿಸಲಾದ 25 ಲಕ್ಷ ರೂಪಾಯಿ ವೆಚ್ಚದಲ್ಲಿನ ನಾಲ್ಕು ಬೋಗಿಯ ಸ್ಕೈ-ಟ್ರ್ಯಾಕ್ ಮಾನೋ ರೈಲು. ಪ್ರತಿ ಬೋಗಿಯಲ್ಲಿ ಎರಡು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಚಾಮುಂಡಿ ಬ್ಲಾಕ್ ಬಳಿ, ಪಿ. ಕಾಳಿಂಗರಾವ್ ರಂಗಮಂದಿರದ ಬಲಭಾಗದಲ್ಲಿ ಮತ್ತು ಮುಖ್ಯದ್ವಾರದಲ್ಲಿ ಮಕ್ಕಳಿಗಾಗಿಯೇ ಅನೇಕ ಆಟಿಕೆಗಳನ್ನು ಇಡಲಾಗಿದೆ. ಮುಖ್ಯದ್ವಾರದಿಂದ ಪೆವಿಲಿಯನ್ ಹಾದಿಯವರೆಗೆ 40 ಜೋಕಾಲಿಗಳನ್ನು ಸ್ಥಾಪಿಸಲಾಗಿದೆ.

ರಸ್ತೆಗಳು
ಮುಖ್ಯ ಪ್ರವೇಶದ್ವಾರದಿಂದ ರಂಗಮಂದಿರದವರೆಗೆ ನಾಲ್ಕು ಮೀಟರ್ ಅಗಲದ ಎರಡು ಕಿ.ಮೀ. ವಿಸ್ತಾರವಾದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಇದಲ್ಲದೇ, ಚಾಮುಂಡಿ ಬ್ಲಾಕ್ ನಿಂದ ಅಮ್ಯೂಸ್‍ಮೆಂಟ್ ಪಾರ್ಕ್‍ವರೆಗೆ, ಅಮ್ಯೂಸ್‍ಮೆಂಟ್ ಪಾರ್ಕ್‍ನಿಂದ ‘ಸಿ’ ಬ್ಲಾಕ್ ಮೂಲಕ ಹಾದುಹೋಗುವಂತೆ ಕನ್ನಡ ಕಾರಂಜಿ ಕಟ್ಟಡದವರೆಗೆ ಮತ್ತು ಮುಖ್ಯದ್ವಾರದವರೆಗೆ ಐದು ಅಡಿ ಅಗಲದ ಒಟ್ಟು ಐದು ಕಿಲೋಮೀಟರ್ ಉದ್ದದ ಡಾಂಬರೀಕರಿಸಿದ ರಸ್ತೆಯನ್ನು ನಿರ್ಮಿಸಲಾಗಿದೆ.

ಪಾರ್ಕಿಂಗ್
ಮುಖ್ಯದ್ವಾರದ ಎದುರಿಗೆ ವಿಶಾಲವಾದ ಸ್ಥಳವನ್ನು ವಾಹನ ನಿಲುಗಡೆಗಾಗಿ ಪ್ರತಿವರ್ಷ ವ್ಯವಸ್ಥೆಗೊಳಿಸಲಾಗುತ್ತದೆ. ಟೆಂದರ್ ಮೂಲಕ ಇದರ ಗುತ್ತಿಗೆಯನ್ನು ನೀಡಲಾಗುತ್ತದೆ.

ಶೌಚಾಲಯಗಳು
ಪ್ರವಾಸಿಗರ ಅನುಕೂಲಕ್ಕಾಗಿ ‘ಎ’ ಬ್ಲಾಕ್, ಚಾಮುಂಡಿ ಬ್ಲಾಕ್, ‘ಸಿ’ ಬ್ಲಾಕ್, ಅಮ್ಯೂಸ್‍ಮೆಂಟ್ ಪಾರ್ಕ್ ಮತ್ತು ಕನ್ನಡ ಕಾರಂಜಿ ಕಟ್ಟಡಗಳ ಸಮೀಪ ಶೌಚಾಲಯಗಳನ್ನು ನಿರ್ಮಿಸಲಾಗಿದೆ.