mysore-dasara-exhibition

ಬೆಂಗಳೂರಿನಿಂದ 140 ಕಿಲೋಮೀಟರ್ ದೂರದಲ್ಲಿ ಹೇಳಲಾಗದ ವೈಭವ ಮತ್ತು ಭವ್ಯತೆಯಿದೆ. ಒಡೆಯರ್ ಮನೆತನದ ರಾಜಧಾನಿಯಾದ ಮೈಸೂರು ತನ್ನ ವಿಸ್ಮಯಕರ ಮೋಡಿ, ಶ್ರೀಮಂತ ಪರಂಪರೆ, ಭವ್ಯವಾದ ಅರಮನೆಗಳು, ಸುಂದರವಾದ ಉದ್ಯಾನವನಗಳು, ಆಕರ್ಷಕ ಕಟ್ಟಡಗಳು, ಅಗಲವಾದ ರಸ್ತೆಗಳು ಮತ್ತು ಪವಿತ್ರವಾದ ದೇವಾಲಯಗಳಿಂದ ಕೂಡಿ ತನ್ನ ಅಭಿಮಾನಿಗಳನ್ನು ಯಾವಾಗಲೂ ಮಂತ್ರಮುಗ್ಧಗೊಳಿಸಿದೆ. ಯಾರನ್ನೂ ಬಿಡದ ಹಳೆಯ ಆಕರ್ಷಣೆಯ ನಂಟು ಈ ಸುಂದರ ನಗರಕ್ಕೆ ಇದೆ.

ಚಾಮುಂಡಿ ಬೆಟ್ಟದ ದೇವತೆಯು ದುಷ್ಟ ಎಮ್ಮೆತಲೆಯ ರಾಕ್ಷಸನಾದ ಮಹಿಷಾಸುರನನ್ನು ಕೊಲ್ಲುವುದರೊಂದಿಗೆ ಮೈಸೂರು ಅಥವಾ ಈ ಹಿಂದೆ ಕರೆಯಲಾಗುತ್ತಿದ್ದ ಮಹಿಷೂರು ತನ್ನ ಇತಿಹಾಸವನ್ನು ಹೊಂದಿದೆ.

ಮೈಸೂರು ದಸರಾ ಆಚರಣೆಯು ದುಷ್ಟಶಕ್ತಿಯ ಮೇಲಿನ ವಿಜಯದ ಆಚರಣೆಯ ಸಂಕೇತವಾಗಿದೆ. ಮಹಾಭಾರತ ಮತ್ತು 3ನೇ ಶತಮಾನದ ಸಾಮ್ರಾಟ ಅಶೋಕನೊಂದಿಗೂ ಮೈಸೂರು ಸಂಬಂಧ ಹೊಂದಿದೆ. ಒಡೆಯರ್ ದೊರೆಗಳ ಆಳ್ವಿಕೆಯ ಕಾಲಕ್ಕೆ ಮೈಸೂರು ತನ್ನ ವೈಭವದ ಪರಾಕಾಷ್ಠೆಯನ್ನು ತಲುಪಿತು.

ಮೈಸೂರು ಕರ್ನಾಟಕದ ಎರಡನೇ ಅತಿದೊಡ್ಡ ನಗರವಾಗಿದೆ. ಇಂದು, ಮೈಸೂರು ಪ್ರವಾಸಿಗರಿಂದ ಮತ್ತು ಸಂದರ್ಶರಿಂದ ತುಂಬಿ ತುಳುಕುವ ರೋಮಾಂಚಕ ನಗರವಾಗಿದೆ. ಅತಿ ಉತ್ಕೃಷ್ಠವಾದ ಶ್ರೀಗಂಧದ ಮರಗಳು ಮತ್ತು ರೇಶಿಮೆಯಿಂದಾಗಿ ಇದು ಪ್ರಪಂಚಾದಾದ್ಯಂತ ಗುರುತಿಸಲ್ಪಟ್ಟಿದೆ. ಇದರ ಭವ್ಯ ಮತ್ತು ಮನೋಹರವಾದ ಅರಮನೆಗಳು, ಭವ್ಯವಾದ ದೇಗುಲಗಳು, ಉದ್ಯಾನವನಗಳು ಪ್ರವಾಸಿಗರ ಮೇಲೆ ಮರೆಯಲಾಗದ ಪ್ರಭಾವವನ್ನು ಬೀರುತ್ತವೆ.

ಮೈಸೂರು ಪದವು ಮಹಿಷೂರು ಅಥವಾ ಮಹಿಷಾಸುರನ ಊರು ಪದದಿಂದ ಬಂದಿದೆ, ಅಂದರೆ ಇಲ್ಲಿ ವಾಸಿಸುತ್ತಿದ್ದನೆಂದು ಹೇಳಲಾಗುವ ರಾಕ್ಷಸ ರಾಜ ಮಹಿಷಾಸುರನ ನಗರ. ಮೈಸೂರಿನ ಇತಿಹಾಸವನ್ನು ಮಹಾಭಾರತದ ಕಾಲಕ್ಕೆ ಕಾಣಬಹುದು. 2ನೇ ಶತಮಾನದಿಂದ ಸುಮಾರು 10ನೇ ಶತಮಾನದವರೆಗೆ ಇದು ಗಂಗರ ಮನೆತನದವರಿಂದ ಆಳಲ್ಪಟ್ಟಿದೆ. ನಂತರ ಚೋಳರು ಒಂದು ಶತಮಾನದವರೆಗೆ ಇಲ್ಲಿ ಆಳ್ವಿಕೆ ನಡೆಸಿರುತ್ತಾರೆ, ಅವರ ನಂತರದಲ್ಲಿ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಸಾಮ್ರಾಟರು ಮತ್ತು ಅಂತಿಮವಾಗಿ 13ನೇ ಶತಮಾನದಿಂದ ಮೈಸೂರಿನ ಯದುವಂಶದ ಅರಸರು ಇಲ್ಲಿ ಆಳ್ವಿಕೆ ನಡೆಸಿರುತ್ತಾರೆ.

ಚಾಮರಾಜ ಒಡೆಯರ್‌ರವರ ಆಳ್ವಿಕೆಯಲ್ಲಿ ಈ ನಗರವು ಪ್ರಾಮುಖ್ಯತೆಯನ್ನು ಪಡೆಯಿತೆಂದು ಹೇಳಲಾಗುತ್ತದೆ. ಸಂಕ್ಷಿಪ್ತ ಅವಧಿಗೆ ಮಾತ್ರ ಒಡೆಯರ್ ಆಳ್ವಿಕೆ ಇಲ್ಲಿ ಸ್ಥಗಿತಗೊಂಡಿತ್ತು ಆದರೆ ಅಂತಿಮವಾಗಿ ಬ್ರಿಟಿಷ್ ಆಡಳಿತದ ಆಜ್ಞಾನುಸಾರ 17ನೇ ಶತಮಾತದ ಕೊನೆಯಲ್ಲಿ ಮರಳಿ ಅಧಿಕಾರವನ್ನು ಪಡೆಯಿತು.